Monday 31 October 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು, ಇವರು ಪತ್ರಿಕೋದ್ಯಮಿಗಳಲ್ಲ ಆದರೂ ಪತ್ರಿಕೋದ್ಯಮಿಗಳು, ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.
ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ
. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟ ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು. ಹಬ್ಬಗಳ- ವಿವಿಧ ಡೇಗಳ ಸಂಭ್ರಮ. ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಃಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‍ಸ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ. ಆತ್ಮ ಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು.. ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನ ಇರಬೇಕು ಅಷ್ಟೆ.ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು, ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.ಇವರು ಸ್ನೇಹಜೀವಿಗಳು, ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು, ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್, ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ. ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಈಚಗುಳಿಯಿಡುವ ಕೀಟಲೆ ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.
ಇಲ್ಲೂ ಧರ್ಮ ರಕ್ಷಣೆಯ ಮಣಭಾರ ಹೊತ್ತವರಿದ್ದಾರೆ
. ಜಾತಿಯ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಅಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ. ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದಕ್ಕೆ ಮೆಚ್ಚುಗೆಯಿರುತ್ತದೆ. ತಪ್ಪು ಕಂಡರೆ ಎಗ್ಗಿಲ್ಲದೆ ಟೀಕೆಯಿರುತ್ತದೆ. ಒಮ್ಮೊಮ್ಮೆ ತೀರಾ ಅಕ್ರೋಶ ಬಂದಾಗ ಇವರು ಅಮೀರ್‌ಖಾನ್‌ನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.
ಇವರು ಬ್ಲಾಗರ್‌ಗಳು
, ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು, ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ ಟಿಎಸ್‌ಆರ್ ಹೆಸರಿನಲ್ಲಿ ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರು ಪ್ರಶಸ್ತಿ ಕೊಡುವುದಿಲ್ಲ ರಿಪೋಟರ್ಸ್ ಗಿಲ್ಡಿನಲ್ಲಿ. ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್‌ಕ್ಲಬ್‌ನಲ್ಲಿ ಮೆಂಬರ್ ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ. ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ. ತಾವು ಬರೆದದ್ದನ್ನು ಓದಿದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ. ಇನ್ನೂ ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.
ಕೆಲವರು ಬ್ಲಾಗರ್‌ಗಳನ್ನು ಸುಖಾಸಮ್ಮನೆ ಬೈಯುತ್ತಾರೆ
. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.
ಪತ್ರಕರ್ತರಲ್ಲದಿದ್ದರೂ
, ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು, ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು ನಿಜ. ಇವರು ಕ್ರಾಂತಿಯನ್ನೇನು ಮಾಡಲಾರರು, ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು, ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

1 comment:

  1. ಧನ್ಯವಾದಗಳು ಒಳ್ಳೆಯ ಮಾತುಗಳಿಗಾಗಿ...
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete