Friday 9 December 2011

ಹೇಗೆ ತೀರಿಸಲಿ ಆ ಋಣವ...?

ಕತ್ತಲಾದರೆ ಬೆನ್ನು ಮೂಳೆಯಾಳದಲ್ಲೆಲ್ಲೋ ಹುಟ್ಟುತ್ತಿದ್ದ ಭಯ ಮೈಯಲ್ಲಾ ಹರಡಿ ಇಡೀ ದೇಹ ವ್ಯಾಪಿಸುತ್ತಿತ್ತು. ಕತ್ತಲಾದ ಮೇಲೆ ಮನೆಗೆ ಬಂದರೆ ಅಪ್ಪ ಕೆಡವಿಕೊಂಡು ಮೈ ನುಗ್ಗಾಗುವಂತೆ ಬಡಿಯುತ್ತಿದ್ದರು. ಎಷ್ಟು ಎಚ್ಚರಿಕೆ ಕೊಟ್ಟರೂ ನನಗೆ ಒಲ್ಲದ್ದೇ ಸಹವಾಸ. ಸಂಬಂಧಿಕರೆಲ್ಲಾ ಹಾದಿ ಬಿಟ್ಟವನ ಪಟ್ಟ ಕಟ್ಟಿಬಿಟ್ಟಿದ್ದರು. ಅವತ್ತಿನ ನನ್ನ ಮನಃಸ್ಥಿತಿಯೇ ಹಾಗಿತ್ತು. ಪ್ರೀತಿಸಿದ ಹುಡುಗಿ ಕಾರಣವೇ ಹೇಳದೆ ಹೊರಟು ಹೋಗಿದ್ದಳು, ಥೇಟು ರವಿಬೆಳಗೆರೆಯವರ ’ಹೇಳಿ ಹೋಗು ಕಾರಣ’ ಕಾದಂಬರಿಯ ಹಿಮವಂತ್‌ನ ಪ್ರೇಯಸಿ ಪ್ರಾರ್ಥನಾಳಂತೆ.
ಎಷ್ಟು ಪ್ರೀತಿಸುತ್ತಿದ್ದಳು. ಕನಸು ಹಂಚಿಕೊಳ್ಳುತ್ತಿದ್ದಳು. ನನಗಾದ ಚಿಕ್ಕ ನೋವಿಗೂ ಕಣ್ಣೀರಾಗುತ್ತಿದ್ದಳು. ನನ್ನ ಸಂತೋಷಕ್ಕೆ ಅವಳು ನವಿಲು, ಸಂಜೆಯ ಬಸ್ಸಿನಲ್ಲಿ ಅವಳೂರಿನವರೆಗೂ ಬಿಟ್ಟು ಬಂದರೇನೇ ನನಗೆ ಸಮಾಧಾನ. ಕತ್ತಲಾದ ಮೇಲೆ ಮನೆಗೆ ಬರುವುದು ಅಭ್ಯಾಸವಾದಂತೆ ಅಪ್ಪನ ಹೊಡೆತ, ಬೈಗುಳಗಳೂ ಅಭ್ಯಾಸವಾಗಿದ್ದವು.
ಅದೆಂಥ ಮೋಡಿಯೋ ಕಾಣೆ ಅವಳ ಸಾಮೀಪ್ಯ, ಅವಳ ಮಾತುಗಳಿಗೋಸ್ಕರ ಮನಸ್ಸು ಸರಿ ರಾತ್ರಿಗಳಲ್ಲಿ ಹಂಬಲಿಸಿ ಬಿಡುತ್ತಿತ್ತು. ಆಗಷ್ಟೇ ತಿಂದ ಹೊಡೆತಗಳನ್ನೂ ಮರೆತು ಬೆಳಕಾಗುವುದನ್ನೇ ಕಾಯುತ್ತಾ ಕುಳಿತುಬಿಡುತ್ತಿದ್ದೆ, ನನ್ನನ್ನು ಇಂಜಿನಿಯರ್ ಮಾಡುವ ಕನಸು ಅಪ್ಪನದು. ನಾನೋ ಪಾಲಿಟೆಕ್ನಿಕ್ಕಿನ ಪುಸ್ತಕಗಳ ಕಡೆ ತಿರುಗಿಯೂ ನೋಡದೆ, ಅವಳ ಪ್ರೀತಿಯಲ್ಲಿ ಮುಳುಗಿ ಮತ್ತೆ ಮತ್ತೆ ಫೇಲಾಗ ತೊಡಗಿದ್ದೆ. ಅವಳು ಬಲು ಜಾಣೆ, ನನ್ನೊಂದಿಗಿನ ಪ್ರೀತಿಯನ್ನು ಸಂಭಾಳಿಸಿಕೊಂಡೂ ಪರೀಕ್ಷೆಗಳಲ್ಲಿ ಪಾಸಾಗಿ ಬಿಟ್ಟಿರುತ್ತಿದ್ದಳು. ಪಿಯುಸಿ ಮುಗಿಸಿ ಡಿಪ್ಲೊಮಾಗೆ ಹೋದ ಮೊದಲ ವರ್ಷ ತೆಕ್ಕೆಯ ತುಂಬ ಮಾರ್ಕು ತೆಗೆದುಕೊಂಡಿದ್ದೆನಾದರೂ, ಎರಡನೇ ವರ್ಷಕ್ಕೆ ಬರುವಷ್ಟರಲ್ಲಿ ಅವಳ ಪ್ರೀತಿಯ ಗುಂಗು ಓದಲು ಬಿಡುತ್ತಿರಲಿಲ್ಲ. ಅಪ್ಪ ಕೆರಳಿದ್ದೇ ಆ ದಿನಗಳಲ್ಲಿ ಇಷ್ಟೆಲ್ಲದರ ನಡುವೆ ಡಿಪ್ಲೊಮಾ ತೃತಿಯ ವರ್ಷದಲ್ಲಿ ನಾನು ಮತ್ತೆ ಫೇಲಾಗಿದ್ದೆ. ಅವಳಾಗಲೇ ಮಹಾವಂಚನೆಗೆ ಅಣಿಯಾಗತೊಡಗಿದ್ದಳು. ಪದೇ ಪದೇ ನನ್ನನ್ನು ಚಿvoiಜ  ಮಾಡತೊಡಗಿದ್ದಳು. ಕೇಳಿದರೆ ಹಾಗೇನಿಲ್ಲ ಅನ್ನುತ್ತಿದ್ದಳು. ಕಡೆಗೊಂದು ದಿನ ನನ್ನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟೇ ಹೋದಳು.
ಮನಸ್ಸು ಮೂಕವಾಗಿತ್ತು. ಮನೆಯಲ್ಲಿ ದಿನ ಕಳೆಯುವುದು ದುಸ್ತರವಾಗಿತ್ತು. ಮನೆ-ಮಂದಿಯೆಲ್ಲಾ ಮೂದಲಿಸುವವರೇ, ಊರ ಬೆಟ್ಟದ ತುದಿಗೆ ಹೋಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಒಂಟಿತನದ ಹುತ್ತ ಕಟ್ಟಿಕೊಂಡಂತೆ ಬದುಕಲಾರಂಭಿಸಿದ್ದೆ. ಮನಸ್ಸು ಖಿನ್ನತೆಯಿಂದ ನರಳುತ್ತಿತ್ತು. ಇಂಥ ದಿನಗಳಲ್ಲೇ ಮನೆಯವರು ನನ್ನನ್ನು ಬೆಂಗಳೂರಿಗೆ ಕಳಿಸಿದ್ದು, ಬೆಂಗಳೂರಿಗೆ ಬಂದ ಮೇಲೆಯೇ ಕನ್ನಡ ಸಾಹಿತ್ಯ ಹಿಡಿ, ಹಿಡಿಯಾಗಿ ನನಗೆ ಓದಲು ಸಿಕ್ಕಿದ್ದು. ಕುವೆಂಪು, ಭೈರಪ್ಪ, ಪೂರ್ಣಚಂದ್ರ ತೇಜಸ್ವಿಯವರು ನನ್ನ ಆಪ್ತ ಸಂಗಾತಿಯಾಗಿದ್ದು.
ಅವತ್ತೊಂದಿನ ನನ್ನ ಹೈಸ್ಕೂಲ್ ಮೇಸ್ಟ್ರು ರಾಘವೇಂದ್ರರು ಅಚಾನಕ್ಕಾಗಿ ನನಗೆ ಸಿಕ್ಕಿ ಬಿಟ್ಟರು, ಮೇಸ್ಟ್ರು ಈಗ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಸಿಕ್ಕ ವಾರವೊಪ್ಪತ್ತಿನಲ್ಲೇ ನನ್ನ ಕಥೆ ಕೇಳಿ ಕಿವಿ ಹಿಂಡಿದರು. ಆಪ್ತತೆಯಿಂದ ಮಾತನಾಡಿಸಿ ಮೈದಡವಿದರು. ಮನೆಗೆ ಕರೆದೊಯ್ದು ಧೈರ್ಯ ತುಂಬಿದರು.
ಹೈಸ್ಕೂಲ್‌ನಲ್ಲಿ ಭಯ ಹುಟ್ಟಿಸುತ್ತಿದ್ದ ಅವರಲ್ಲಿ ಒಬ್ಬ ಆಪ್ತ ಸ್ನೇಹಿತನನ್ನು ನಾನು ಕಂಡು ಕೊಂಡಿದ್ದೆ, ಅವರು ನನ್ನ ಘಾಸಿಗೊಂಡ ಮನಸಿಗೆ ಆತ್ಮವಿಶ್ವಾಸ ತುಂಬಿದರು. ಪುಟ್ಟ ಕಂಪನಿಯಲ್ಲೊಂದು ಕೆಲಸಕೊಡಿಸಿ ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ಕೊಟ್ಟರು. ನನಗೆ ಹೊಸ ಬದುಕೊಂದನ್ನು ಕಲ್ಪಿಸಿದರು. ಜೀವನೋತ್ಸಾಹ ತುಂಬಿದರು. ಹೇಗೆ ತೀರಿಸಲಿ, ಅವರ ಋಣ?.

3 comments: