Friday 9 December 2011

ಹೇಗೆ ತೀರಿಸಲಿ ಆ ಋಣವ...?

ಕತ್ತಲಾದರೆ ಬೆನ್ನು ಮೂಳೆಯಾಳದಲ್ಲೆಲ್ಲೋ ಹುಟ್ಟುತ್ತಿದ್ದ ಭಯ ಮೈಯಲ್ಲಾ ಹರಡಿ ಇಡೀ ದೇಹ ವ್ಯಾಪಿಸುತ್ತಿತ್ತು. ಕತ್ತಲಾದ ಮೇಲೆ ಮನೆಗೆ ಬಂದರೆ ಅಪ್ಪ ಕೆಡವಿಕೊಂಡು ಮೈ ನುಗ್ಗಾಗುವಂತೆ ಬಡಿಯುತ್ತಿದ್ದರು. ಎಷ್ಟು ಎಚ್ಚರಿಕೆ ಕೊಟ್ಟರೂ ನನಗೆ ಒಲ್ಲದ್ದೇ ಸಹವಾಸ. ಸಂಬಂಧಿಕರೆಲ್ಲಾ ಹಾದಿ ಬಿಟ್ಟವನ ಪಟ್ಟ ಕಟ್ಟಿಬಿಟ್ಟಿದ್ದರು. ಅವತ್ತಿನ ನನ್ನ ಮನಃಸ್ಥಿತಿಯೇ ಹಾಗಿತ್ತು. ಪ್ರೀತಿಸಿದ ಹುಡುಗಿ ಕಾರಣವೇ ಹೇಳದೆ ಹೊರಟು ಹೋಗಿದ್ದಳು, ಥೇಟು ರವಿಬೆಳಗೆರೆಯವರ ’ಹೇಳಿ ಹೋಗು ಕಾರಣ’ ಕಾದಂಬರಿಯ ಹಿಮವಂತ್‌ನ ಪ್ರೇಯಸಿ ಪ್ರಾರ್ಥನಾಳಂತೆ.
ಎಷ್ಟು ಪ್ರೀತಿಸುತ್ತಿದ್ದಳು. ಕನಸು ಹಂಚಿಕೊಳ್ಳುತ್ತಿದ್ದಳು. ನನಗಾದ ಚಿಕ್ಕ ನೋವಿಗೂ ಕಣ್ಣೀರಾಗುತ್ತಿದ್ದಳು. ನನ್ನ ಸಂತೋಷಕ್ಕೆ ಅವಳು ನವಿಲು, ಸಂಜೆಯ ಬಸ್ಸಿನಲ್ಲಿ ಅವಳೂರಿನವರೆಗೂ ಬಿಟ್ಟು ಬಂದರೇನೇ ನನಗೆ ಸಮಾಧಾನ. ಕತ್ತಲಾದ ಮೇಲೆ ಮನೆಗೆ ಬರುವುದು ಅಭ್ಯಾಸವಾದಂತೆ ಅಪ್ಪನ ಹೊಡೆತ, ಬೈಗುಳಗಳೂ ಅಭ್ಯಾಸವಾಗಿದ್ದವು.
ಅದೆಂಥ ಮೋಡಿಯೋ ಕಾಣೆ ಅವಳ ಸಾಮೀಪ್ಯ, ಅವಳ ಮಾತುಗಳಿಗೋಸ್ಕರ ಮನಸ್ಸು ಸರಿ ರಾತ್ರಿಗಳಲ್ಲಿ ಹಂಬಲಿಸಿ ಬಿಡುತ್ತಿತ್ತು. ಆಗಷ್ಟೇ ತಿಂದ ಹೊಡೆತಗಳನ್ನೂ ಮರೆತು ಬೆಳಕಾಗುವುದನ್ನೇ ಕಾಯುತ್ತಾ ಕುಳಿತುಬಿಡುತ್ತಿದ್ದೆ, ನನ್ನನ್ನು ಇಂಜಿನಿಯರ್ ಮಾಡುವ ಕನಸು ಅಪ್ಪನದು. ನಾನೋ ಪಾಲಿಟೆಕ್ನಿಕ್ಕಿನ ಪುಸ್ತಕಗಳ ಕಡೆ ತಿರುಗಿಯೂ ನೋಡದೆ, ಅವಳ ಪ್ರೀತಿಯಲ್ಲಿ ಮುಳುಗಿ ಮತ್ತೆ ಮತ್ತೆ ಫೇಲಾಗ ತೊಡಗಿದ್ದೆ. ಅವಳು ಬಲು ಜಾಣೆ, ನನ್ನೊಂದಿಗಿನ ಪ್ರೀತಿಯನ್ನು ಸಂಭಾಳಿಸಿಕೊಂಡೂ ಪರೀಕ್ಷೆಗಳಲ್ಲಿ ಪಾಸಾಗಿ ಬಿಟ್ಟಿರುತ್ತಿದ್ದಳು. ಪಿಯುಸಿ ಮುಗಿಸಿ ಡಿಪ್ಲೊಮಾಗೆ ಹೋದ ಮೊದಲ ವರ್ಷ ತೆಕ್ಕೆಯ ತುಂಬ ಮಾರ್ಕು ತೆಗೆದುಕೊಂಡಿದ್ದೆನಾದರೂ, ಎರಡನೇ ವರ್ಷಕ್ಕೆ ಬರುವಷ್ಟರಲ್ಲಿ ಅವಳ ಪ್ರೀತಿಯ ಗುಂಗು ಓದಲು ಬಿಡುತ್ತಿರಲಿಲ್ಲ. ಅಪ್ಪ ಕೆರಳಿದ್ದೇ ಆ ದಿನಗಳಲ್ಲಿ ಇಷ್ಟೆಲ್ಲದರ ನಡುವೆ ಡಿಪ್ಲೊಮಾ ತೃತಿಯ ವರ್ಷದಲ್ಲಿ ನಾನು ಮತ್ತೆ ಫೇಲಾಗಿದ್ದೆ. ಅವಳಾಗಲೇ ಮಹಾವಂಚನೆಗೆ ಅಣಿಯಾಗತೊಡಗಿದ್ದಳು. ಪದೇ ಪದೇ ನನ್ನನ್ನು ಚಿvoiಜ  ಮಾಡತೊಡಗಿದ್ದಳು. ಕೇಳಿದರೆ ಹಾಗೇನಿಲ್ಲ ಅನ್ನುತ್ತಿದ್ದಳು. ಕಡೆಗೊಂದು ದಿನ ನನ್ನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟೇ ಹೋದಳು.
ಮನಸ್ಸು ಮೂಕವಾಗಿತ್ತು. ಮನೆಯಲ್ಲಿ ದಿನ ಕಳೆಯುವುದು ದುಸ್ತರವಾಗಿತ್ತು. ಮನೆ-ಮಂದಿಯೆಲ್ಲಾ ಮೂದಲಿಸುವವರೇ, ಊರ ಬೆಟ್ಟದ ತುದಿಗೆ ಹೋಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಒಂಟಿತನದ ಹುತ್ತ ಕಟ್ಟಿಕೊಂಡಂತೆ ಬದುಕಲಾರಂಭಿಸಿದ್ದೆ. ಮನಸ್ಸು ಖಿನ್ನತೆಯಿಂದ ನರಳುತ್ತಿತ್ತು. ಇಂಥ ದಿನಗಳಲ್ಲೇ ಮನೆಯವರು ನನ್ನನ್ನು ಬೆಂಗಳೂರಿಗೆ ಕಳಿಸಿದ್ದು, ಬೆಂಗಳೂರಿಗೆ ಬಂದ ಮೇಲೆಯೇ ಕನ್ನಡ ಸಾಹಿತ್ಯ ಹಿಡಿ, ಹಿಡಿಯಾಗಿ ನನಗೆ ಓದಲು ಸಿಕ್ಕಿದ್ದು. ಕುವೆಂಪು, ಭೈರಪ್ಪ, ಪೂರ್ಣಚಂದ್ರ ತೇಜಸ್ವಿಯವರು ನನ್ನ ಆಪ್ತ ಸಂಗಾತಿಯಾಗಿದ್ದು.
ಅವತ್ತೊಂದಿನ ನನ್ನ ಹೈಸ್ಕೂಲ್ ಮೇಸ್ಟ್ರು ರಾಘವೇಂದ್ರರು ಅಚಾನಕ್ಕಾಗಿ ನನಗೆ ಸಿಕ್ಕಿ ಬಿಟ್ಟರು, ಮೇಸ್ಟ್ರು ಈಗ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಸಿಕ್ಕ ವಾರವೊಪ್ಪತ್ತಿನಲ್ಲೇ ನನ್ನ ಕಥೆ ಕೇಳಿ ಕಿವಿ ಹಿಂಡಿದರು. ಆಪ್ತತೆಯಿಂದ ಮಾತನಾಡಿಸಿ ಮೈದಡವಿದರು. ಮನೆಗೆ ಕರೆದೊಯ್ದು ಧೈರ್ಯ ತುಂಬಿದರು.
ಹೈಸ್ಕೂಲ್‌ನಲ್ಲಿ ಭಯ ಹುಟ್ಟಿಸುತ್ತಿದ್ದ ಅವರಲ್ಲಿ ಒಬ್ಬ ಆಪ್ತ ಸ್ನೇಹಿತನನ್ನು ನಾನು ಕಂಡು ಕೊಂಡಿದ್ದೆ, ಅವರು ನನ್ನ ಘಾಸಿಗೊಂಡ ಮನಸಿಗೆ ಆತ್ಮವಿಶ್ವಾಸ ತುಂಬಿದರು. ಪುಟ್ಟ ಕಂಪನಿಯಲ್ಲೊಂದು ಕೆಲಸಕೊಡಿಸಿ ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ಕೊಟ್ಟರು. ನನಗೆ ಹೊಸ ಬದುಕೊಂದನ್ನು ಕಲ್ಪಿಸಿದರು. ಜೀವನೋತ್ಸಾಹ ತುಂಬಿದರು. ಹೇಗೆ ತೀರಿಸಲಿ, ಅವರ ಋಣ?.

Monday 31 October 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು, ಇವರು ಪತ್ರಿಕೋದ್ಯಮಿಗಳಲ್ಲ ಆದರೂ ಪತ್ರಿಕೋದ್ಯಮಿಗಳು, ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.
ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ
. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟ ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು. ಹಬ್ಬಗಳ- ವಿವಿಧ ಡೇಗಳ ಸಂಭ್ರಮ. ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಃಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‍ಸ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ. ಆತ್ಮ ಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು.. ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನ ಇರಬೇಕು ಅಷ್ಟೆ.ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು, ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.ಇವರು ಸ್ನೇಹಜೀವಿಗಳು, ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು, ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್, ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ. ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಈಚಗುಳಿಯಿಡುವ ಕೀಟಲೆ ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.
ಇಲ್ಲೂ ಧರ್ಮ ರಕ್ಷಣೆಯ ಮಣಭಾರ ಹೊತ್ತವರಿದ್ದಾರೆ
. ಜಾತಿಯ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಅಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ. ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದಕ್ಕೆ ಮೆಚ್ಚುಗೆಯಿರುತ್ತದೆ. ತಪ್ಪು ಕಂಡರೆ ಎಗ್ಗಿಲ್ಲದೆ ಟೀಕೆಯಿರುತ್ತದೆ. ಒಮ್ಮೊಮ್ಮೆ ತೀರಾ ಅಕ್ರೋಶ ಬಂದಾಗ ಇವರು ಅಮೀರ್‌ಖಾನ್‌ನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.
ಇವರು ಬ್ಲಾಗರ್‌ಗಳು
, ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು, ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ ಟಿಎಸ್‌ಆರ್ ಹೆಸರಿನಲ್ಲಿ ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರು ಪ್ರಶಸ್ತಿ ಕೊಡುವುದಿಲ್ಲ ರಿಪೋಟರ್ಸ್ ಗಿಲ್ಡಿನಲ್ಲಿ. ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್‌ಕ್ಲಬ್‌ನಲ್ಲಿ ಮೆಂಬರ್ ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ. ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ. ತಾವು ಬರೆದದ್ದನ್ನು ಓದಿದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ. ಇನ್ನೂ ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.
ಕೆಲವರು ಬ್ಲಾಗರ್‌ಗಳನ್ನು ಸುಖಾಸಮ್ಮನೆ ಬೈಯುತ್ತಾರೆ
. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.
ಪತ್ರಕರ್ತರಲ್ಲದಿದ್ದರೂ
, ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು, ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು ನಿಜ. ಇವರು ಕ್ರಾಂತಿಯನ್ನೇನು ಮಾಡಲಾರರು, ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು, ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

Monday 10 October 2011

ಮತ್ತೆ ಬಂದ ಡಬ್ಬಿಂಗ್ ಭೂತ ಕನ್ನಡ ಚಿತ್ರರಂಗ ಗೋತಾ?

ಕನ್ನಡ
ಚಿತ್ರರಂಗದ ತಲೆಬಾಗಿಲಿನಲ್ಲಿ ಮತ್ತೊಮ್ಮೆ ಡಬ್ಬಿಂಗ್ ಭೂತ ಬಾಯ್ತೆರೆದು ನಿಂತಿದೆ. ಆದರೆ ಭಾರಿ ಅದು ಕಿರುತೆರೆಯ ದಾರಿಯಲ್ಲಿ ಹಿರಿತೆರೆ ಪ್ರವೇಶಿಸುವುದು ನಿಚಳವಾಗಿದೆ. ಡಬ್ಬಿಂಗ್ ವಿವಾದದ ಬಗ್ಗೆ ಚರ್ಚೆಗಳೇ ಆಗದಂತೆ ತಡೆಯುವ, ಚಿತ್ರರಂಗದ ಪ್ರಮುಖರನ್ನೇ ಬೆದರಿಸಿ ಡಬ್ಬಿಂಗ್ ಪರ ಒಳಲಾಬಿ ನಡೆಸುವ ಶಕ್ತಿಗಳು ವಾಣಿಜ್ಯ ಮಂಡಳಿಯ ಕೈ ಕಟ್ಟಿಹಾಕಿ ಮಂಡಳಿಯಿಂದ ಸ್ಪಷ್ಟ ನಿರ್ಧಾರ ಹೊರಬೀಳದ ಸನ್ನಿವೇಶ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಭಾರಿ ಡಬ್ಬಿಂಗ್ ವಿವಾದದ ಬಗ್ಗೆ ಕಿರುತೆರೆಯಲ್ಲಿ ಪ್ರಸಾರವಾದ ಹಿಂದಿ ಧಾರಾವಾಹಿಯೊಂದರ ಮೂಲಕ ಚರ್ಚೆಗಳು ಮತ್ತೆ ಚಾಲನೆ ಪಡೆದುಕೊಂಡಿವೆ. ಡಬ್ಬಿಂಗ್ ಪರ ಶಕ್ತಿಗಳ ಮೌನದ ನಡುವೆಯೂ ವಿವಾದ ಚರ್ಚೆಗಳ ರೂಪದಲ್ಲಿ ಮತ್ತೇ ಪ್ರತ್ಯಕ್ಷವಾಗಿದೆ. ಹಿರಿತೆರೆಯಲ್ಲಿ ವಿವಾದದ ಬಗ್ಗೆ ಹಗ್ಗ-ಜಗ್ಗಾಟ ನಡೆಯುತ್ತಿರುವಾಗಲೇ ಕಿರುತೆರೆಯ ಮಂದಿಯಾಗಲೇ ಡಬ್ಬಿಂಗ್ ವಿರುದ್ದ ಸಮರ ಸಾರಿದ್ದಾರೆ, ಡಬ್ಬಿಂಗ್ ಸಂಸ್ಕೃತಿಯ ಬಗ್ಗೆ ಚರ್ಚೆಗಳು ಆರಂಭವಾಗಲು ನಾಂದಿಯಾಡಿದ್ದಾರೆ. ಡಬ್ಬಿಂಗ್ ಬಗ್ಗೆ ದಿಟ್ಟ ನಿರ್ಧಾರವೊಂದನ್ನು ಕೈಗೊಳ್ಳುವ ನಿಟ್ಟಿನತ್ತ ಚರ್ಚೆಗಳು ವಾದ-ವಿವಾದಗಳು ಸಾಗಿದ್ಧಾರೆ ಒಪ್ಪಬಹುದಿತ್ತು ಆದರೆ, ಭಾರೀಯೂ ಡಬ್ಬಿಂಗ್ ಭೂತ ಸೃಷ್ಟಿಸಿರುವುದು ಪರ ವಿರೋಧದ ಕೆಸರೆರೆಚಾಟವನ್ನೇ ಹೊರತು ಡಬ್ಬಿಂಗ್ ಎನ್ನುವುದು ನಿಜಕ್ಕೂ ಬೇಕೆ, ಬೇಡವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವತ್ತ ಸಾಗುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಭಾರೀ ಡಬ್ಬಿಂಗ್ ಬಗ್ಗೆ ವಿವಾದ ಭುಗಿಲೇಳಲು ಕಾರಣ ಕಿರುತೆರೆಗೂ ನುಸುಳುತ್ತಿರುವ ಡಬ್ಬಿಂಗ್ ಸಂಸ್ಕೃತಿ. ಸ್ವಾತಂತ್ರ್ಯ ದಿನದಂದು ಕನ್ನಡದ ಕಿರುತೆರೆ ವಾಹಿನಿಯೊಂದು ಝಾನ್ಸಿರಾಣಿ ಲಕ್ಷ್ಮಿಬಾಯಿಕುರಿತಾದ ಕಾರ್ಯಕ್ರಮ ಪ್ರಸಾರ ಮಾಡಿದ್ದೆ ಕನ್ನಡದ ಚಿತ್ರೋದ್ಯಮದಲ್ಲಿ ಮತ್ತೆ ವಿವಾದ ಕಾಣಿಸಿಕೊಳ್ಳಲು ನೆಪವಾಗಿದೆ. ಅವತ್ತು, ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ ೧೫ರಂದು ಅತ್ತ ಝೀ ವಾಹಿನಿಯಲ್ಲಿ ಹಿಂದಿ ಧಾರಾವಾಹಿ ಅದೇ ಬಾಷೆಯಲ್ಲಿ ಯಥಾವತ್ತಾಗಿ ಆರಂಭವಾಗುತ್ತಿದ್ದಂತೆಯೇ ಇತ್ತ ಕಿರುತೆರೆಯ ಕಲಾವಿದರು ಕನಲಿ ಹೋದರು. ಎಂ.ಜಿ.ರಸ್ತೆಯ ವಾಹಿನಿಯ ಕಚೇರಿಗೆ ನುಗ್ಗಿದ್ದೇ ಪೀಠೋಪಕರಣ, ಕಂಪ್ಯೂಟರ್ಗಳನ್ನು ಪುಡಿಪುಡಿ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿಬಿಟ್ಟರು. ಮೂಲಕ ಮತ್ತೊಮ್ಮೆ ಡಬ್ಬಿಂಗ್ ಭೂತದ ಬಗ್ಗೆ ಚರ್ಚೆಗಳು ಆರಂಭವಾದಂತಾಯಿತು. ನಿಜಕ್ಕೂ ಚಿತ್ರರಂಗದ ಹಿರಿಯರು ವಿವಾದದ ಅಂತ್ಯವನ್ನು ಬಯಸಿದ್ದರೆ, ಯಾವತ್ತೋ ಡಬ್ಬಿಂಗ್ ವಿವಾದ ಬಗೆಹರಿದು ಹೋಗುತ್ತಿತ್ತು. ಆದರೆ, ಉದ್ಯಮದಲ್ಲಿ ತಮಗೆ ಸಂಕಷ್ಟ ಬಂದಾಗ ಮಾತ್ರ ಬೊಬ್ಬಿರಿಯುವ ಮಂದಿ ಬೇರೆಯವರು ಕಷ್ಟಕ್ಕೆ ಸಿಕ್ಕಾಗ ಮಾತ್ರ ಸಮಸ್ಯೆಯಲ್ಲೂ ತಮಗೆ ಲಾಭವಾಗುವ ಅಂಶಗಳ್ಯಾವುವು ಎಂಬ ಬಗ್ಗೆಯೇ ಗಮನ ಹರಿಸುವುದಿರಿಂದ ಡಬ್ಬಿಂಗ್ ಸಂಸ್ಕೃತಿಯ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಷ್ಟೇ ವೇಗವಾಗಿ ತಣ್ಣಗೂ ಆಗುತ್ತವೆ. ಗಾಂಧಿನಗರ ಕೆಲ ನಿರ್ಮಾಪಕರು ಡಬ್ಬಿಂಗ್ನಿಂದ ತಮಗೆ ಲಾಭ ಬರುವುದು ಖಚಿತವಾದರೆ, ಅಣ್ಣಮ್ಮನ ಮೇಲೆ ಆಣೆಯಿಟ್ಟು ಡಬ್ಬಿಂಗ್ ಅಲ್ಲ ಎಂದು ಕನ್ನಡಿಗರ ಕಿವಿ ಮೇಲೆ ಹೂ ಇಡಲು ಸಿದ್ದರಾಗಿಬಿಡುತ್ತಾರೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಂತೂ ಡಬ್ಬಿಂಗ್ ಬಗ್ಗೆ ಜೋರಾಗಿ ಉಸಿರೆತ್ತಲೂ ಹಿಂಜರಿಯುತ್ತದೆ. ಡಬ್ಬಿಂಗ್ ಪರವಾಗಿ ಬ್ಯಾಟಿಂಗ್ ನಡೆಸುವ ನಿರ್ಮಾಪಕರ ಲಾಬಿಯೂ ಪ್ರಬಲವಾಗಿರುವು ದರಿಂದಲೇ ವಾಣಿಜ್ಯ ಮಂಡಳಿ ಡಬ್ಬಿಂಗ್ ಬಗ್ಗೆ ಚರ್ಚೆ ಮಾಡಲು ಹಿಂಜರಿಯುತ್ತದೆ. ಕೆಲ ಭಾರಿ ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆಗಳು ನಡೆದಿವೆಯಾದರೂ ಅವು ನೆಪಮಾತ್ರಕಷ್ಟೇ. ಇನ್ನು ಚಿತ್ರರಂಗದ ಹಿರಿಯ ಅಭಿಪ್ರಾಯಗಳೇನು ಎಂಬುದನ್ನು ಗಮನಿಸಲು ಹೋದರೆ, ಕೆಲವರು ವಿಷಯದಲ್ಲಿ ಕೆಚ್ಚೆದೆಯ ನಿಲುವುಗಳನ್ನು ವ್ಯಕ್ತಪಡಿಸುತ್ತಾರಾದರೂ, ಡಬ್ಬಿಂಗ್ ಪರ ಮಾತನಾಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ಕಿರುತೆರೆಯ ಕಲಾವಿದರು ಮೊನ್ನೆ ನಡೆಸಿದ ದಾಂಧಲೆಯ ಬಗೆಯಂತೂ ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಸಂಪರ್ಕ ತಾಣಗಳಲ್ಲಿಯೂ ಭರ್ಜರಿ ಚರ್ಚೆಯಾಗುತ್ತಿದೆ. ಚರ್ಚೆಗೂ ಕೂಡ ಡಬ್ಬಿಂಗ್ ಪರ ಲೇಪನವಿರುವುದರಿಂದ ಅದನ್ನೂ ಕೂಡ ಡಬ್ಬಣ್ಣರ ಕುಯುಕ್ತಿ ಎನ್ನುವವರೂ ಇದ್ದಾರೆ.ಕನ್ನಡ ಚಿತ್ರರಂಗದವರು ಡಬ್ಬಿಂಗ್ ಸಂಸ್ಕೃತಿಯನ್ನು ವಿರೋಧಿಸುತ್ತಾರೆ. ಮನೋರಂಜನೆ ಕನ್ನಡಕ್ಕೆ ಡಬ್ ಆಗಬಾರದೆಂಬ ವಾದದಲ್ಲಿ ಕನ್ನಡ ಉಳಿಸುವ ಇರಾದೆ ಇದ್ದರೆ ಯಾರದೂ ತರಕಾರು ಇರುತ್ತಿರಲಿಲ್ಲ. ಆದರೆ, ಇದರಲ್ಲಡಗಿರುವುದು ಸ್ವಹಿತಾಸಕ್ತಿ ಎಂಬ ಮಾತು ಒಂದೆಡೆ ಕೇಳಿ ಬಂದರೆ, ಇನ್ನೊಂದು ಕಡೆ ಡಬ್ಬಿಂಗ್ ನಮ್ಮ ಸೃಜನಶೀಲತೆಯನ್ನೇ ಕೊಂದು ಎಂಜಲು ಸಂಸ್ಕೃತಿಯತ್ತ ಸಾಗಲು ಹಾದಿಯಾಗುತ್ತದೆ ಎನ್ನುವವರು ಇದ್ದಾರೆ. ಡಬ್ಬಿಂಗ್ ಬಗ್ಗೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗಾಭರಣ ಹೇಳಿರುವ ಮಾತುಗಳನ್ನು ಪ್ರಸ್ತಾಪಿಸಿ ನೋಡಿದರೆ, ನಾಡು-ನುಡಿ ಕನ್ನಡ ಚಿತ್ರೋದ್ಯಮದ ರಕ್ಷಣೆಗೆ ಡಬ್ಬಿಂಗ್ ವಿರೋಧಿ ನಿಲುವು ತಾಳಬೇಕಾದ ಅನಿವಾರ್ಯತೆ ಅರ್ಥವಾಗುತ್ತದೆ. ರಿಮೇಕ್ ಹೊಡೆತವನ್ನೇ ತಡೆದುಕೊಳ್ಳಲಾಗದೆ ನಿತ್ರಾಣವಾಗುವ ನಮ್ಮ ಚಿತ್ರ ಸಂಸ್ಕೃತಿ ಇನ್ನು ಡಬ್ಬಿಂಗ್ ಹೊಡೆತವನ್ನು ತಡೆದುಕೊಳ್ಳುತ್ತದೆಯೇ ಎಂದು ಅವರು ಎತ್ತಿದ ಪ್ರಶ್ನೆಯೂ ಸಮಂಜಸವಾಗಿಯೇ ಇದೆ.ಡಬ್ಬಿಂಗ್ ಪರವಾಗಿ ಮಾತನಾಡುವವರು ಹಾಲಿವುಡ್, ಬಾಲಿವುಡ್, ನೆರೆರಾಜ್ಯಗಳ ಚಿತ್ರರಂಗಗಳನ್ನು ಉದಾಹರಣೆಯಾಗಿ ಕೊಡುತ್ತಾರಾದರೂ, ಕನ್ನಡದ ಭಾಷೆಯ ಚಿತ್ರಗಳಿಗಿರುವ ಮಾರುಕಟ್ಟೆಯ ಬಗ್ಗೆ ಯಾರು ಚಕಾರವೆತ್ತುವುದಿಲ್ಲ.ಪುಟ್ಟ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ಇಲ್ಲದೆ ಕನ್ನಡ ಚಿತ್ರಗಳು ತತ್ತರಿಸುತ್ತಿರುವಾಗ ಡಬ್ಬಿಂಗ್ ಸಂಸ್ಕೃತಿ ಪ್ರವೇಶವಾದರೆ, ಕನ್ನಡ ಚಲನಚಿತ್ರ ರಂಗ ಹಾಗೂ ಮಾರುಕಟ್ಟೆಯನ್ನೇ ಅದು ತನ್ನ ಕಬಂಧಬಾಹುಗಳಲ್ಲಿ ಬಂಧಿಸಿಬಿಡುವುದರಲ್ಲಿ ಯಾವ ಸಂಶಯವೂ ಇಲ್ಲ. ಇನ್ನೂ ರಾಜ್ ಪುತ್ರ ಶಿವಣ್ಣ ಕೂಡ ಡಬ್ಬಿಂಗ್ ಬಗ್ಗೆ ದಿಟ್ಟವಾದ ಮಾತುಗಳನ್ನೇ ಹಾಡಿದ್ದಾರೆ.’ಸೆಟಲೈಟ್ ರೈಟ್ನಿಂದ ದುಡ್ಡು ಬರುತ್ತೇ ಅನ್ನೊ ಕಾರಣಕ್ಕೆ ಕೆಲಸ ಮಾಡಬೇಡಿ, ದುಡ್ಡು ಸಂಪಾದಿಸಬೇಕೆಂದರೆ ನಿಯತ್ತಾಗಿರಬೇಕು, ಆಗ ದುಡಿದ ದುಡ್ಡು ಸಹ ಅರಗುತ್ತೆಇದನ್ನು ನಾನು ಕನ್ನಡಿಗರ ಪರವಾಗಿ ಹೇಳುತ್ತಿದ್ದೇನೆ ಎಂದಿರುವ ಅವರ ಮಾತು ತಗುಲಬೇಕಾದ ಜಾಗಕ್ಕೆ ಸರಿಯಾಗಿ ತಾಗಿದೆ. ಅವರ ಮಾತಿನ ಏಟಿಗೆ ಡಬ್ಬಿಂಗ್ ಪರವಾಗಿರುವವರು ಒಳಗೊಳಗೆ ಮಚ್ಚು ಮಸೆಯುತ್ತಿದ್ದರಾದರೂ ಡಬ್ಬಿಂಗ್ ಪರ ಬಹಿರಂಗವಾದಕ್ಕಿಳಿದರೆ, ಜನ ಕ್ಯಾಕರಿಸಿಯಾರೂ ಎಂಬ ಭಯವೂ ಅವರಿಗೆ ಇದ್ದಂತಿದೆ. ರಿಮೇಕ್ ಹಾಗೂ ಡಬ್ಬಿಂಗ್ ಪರ ಬ್ಯಾಟ್ ಬೀಸುವ ಮಂದಿ ಕೇವಲ ತಮ್ಮ ತಿಜೋರಿ ತುಂಬಿಸಿಕೊಳ್ಳುವ ಸಲುವಾಗಿಯೇ ಡಬ್ಬಿಂಗ್ ಬಗ್ಗೆ ಚರ್ಚೆಯಾಗದಂತೆ ನೋಡಿಕೊಳ್ಳುತ್ತಾರೆಂಬುದು ಎಲ್ಲರಿಗೂ ಅರ್ಥವಾಗಿರುವುದರಿಂದ ಹೋರಾಟ ಆರಂಭಿಸಲು ಇದು ಸುಸಮಯ ಎಂದೇ ಹೇಳಬಹುದು.
ನಮ್ಮ
ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಲು ಡಬ್ಬಿಂಗ್ ವಿರೋಧಿ ನಿಲುವು ತಳೆಯುವುದು ಅನಿವಾರ್ಯವೂ ಆಗಿರುವುದರಿಂದ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಕೊಂಚ ಧೈರ್ಯ ಪ್ರದರ್ಶಿಸಿ ವಿವಾದಕ್ಕೊಂದು ಅಂತ್ಯ ಹಾಡುವುದು ಕೂಡ ಅನಿವಾರ್ಯವಾಗಿದೆ. ಹಿಂದೆ ಭಾರತ್ ೨೦೦೦ ಎಂಬ ತೆಲುಗಿನಲ್ಲಿ ತಯಾರಾದ ರಾಮೋಜಿ ರಾವ್ ನಿರ್ಮಿಸಿದ ಚಿತ್ರ ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆಯಾದಾಗ, ಅದರ ವಿರುದ್ದ ದೊಡ್ಡ ರಣ-ರಂಪಾಟವೇ ಆಗಿತ್ತು. ಅವತ್ತು ಎಚ್ಚೆತ್ತುಕೊಂಡಿದ್ದ ಚಿತ್ರರಂಗದ ಪ್ರಮುಖರು, ಕಾರ್ಮಿಕರು, ತಂತ್ರಜ್ಞರ ಒಕ್ಕೂಟ ಡಬ್ಬಿಂಗ್ ಲಾಬಿಯ ವಿರುದ್ದ ದೊಡ್ಡದಾಗಿ ಧ್ವನಿ ಎತ್ತಿ ನಿಂತಿತ್ತು. ಯಾವಾಗ ವಿವಾದವಾಯಿತೋ ಡಬ್ಬಿಂಗ್ ಗಂಡು ಮೂಡೆ ಕಟ್ಟಿತ್ತು. ಈಗ ಮತ್ತೇ ಧುತ್ತನೇ ಪ್ರತ್ಯಕ್ಷವಾಗಿದೆ. ಕನ್ನಡ ಕಿರುತೆರೆಯಲ್ಲಿ ಕೋಲಾಹಲವೆಬ್ಬಿಸುವ ಮೂಲಕ ಹಿರಿತೆರೆಯನ್ನು ಅಣಕಿಸುತ್ತಿದೆ. ವಾಣಿಜ್ಯ ಮಂಡಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದೇ?